ಜಾನಪದ ವಿಭಜನೆ -  
ಜಾನಪದ ಅಧ್ಯಯನದಲ್ಲಿ ಜಾನಪದದ ವಿವಿಧ ಅಂಗಗಳಾಗಿ ಯಾವ ಯಾವ ವಿಷಯವನ್ನು ಸಂಗ್ರಹಿಸಬೇಕು, ಅವನ್ನು ಹೇಗೆ ವೈಜ್ಞಾನಿಕವಾಗಿ ವಿಂಗಡಿಸಿಕೊಳ್ಳಬೇಕು, ಪ್ರತಿ ಜಾನಪದ ವಸ್ತು ವಿಷಯಗಳ ಮೂಲವನ್ನು, ಅರ್ಥವನ್ನು, ಪ್ರಯೋಜನ ಹಾಗೂ ಇತಿಹಾಸವನ್ನು ಗುರುತಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು-ಎಂಬ ವಿಷಯಗಳತ್ತ ಜಾನಪದ ವಿಜ್ಞಾನಿ ಯೋಚಿಸುತ್ತಾನೆ. ತಾನು ಸಂಗ್ರಹಿಸಿ ತಂದ ಸಾಹಿತ್ಯರಾಶಿಯನ್ನು ಕ್ರಮವರಿತು ವಿಂಗಡಿಸಿಕೊಳ್ಳದ ಹೊರತು ಅವನ ಅಧ್ಯಯನ ಶಾಸ್ತ್ರೀಯವೆನಿಸಿಸುವುದಿಲ್ಲ. ಹೀಗಾಗಿ ಜಾನಪದ ಸಂಶೋಧನೆಯಲ್ಲಿ ಮೂಲ ಸಾಮಗ್ರಿಯ ವರ್ಗೀಕರಣ ಅತ್ಯಂತ ಮಹತ್ತ್ವದ ವಿಷಯವೆನಿಸಿದೆ.

ಫ್ರಾನ್ಸಿಸ್ ಲೀ ಆಟ್ಲ್ ಎಂಬ ವಿದ್ವಾಂಸ ನಾಲ್ಕು ಪ್ರಮುಖ ವರ್ಗಗಳಲ್ಲಿ ಜಾನಪದವನ್ನು ವಿಂಗಡಿಸಿದ್ದಾನೆ: 1. ಸಾಹಿತ್ಯ ಮತ್ತು ಇತರ ಕಲೆಗಳು, 2. ನಂಬಿಕೆ ಸಂಪ್ರದಾಯ ಮತ್ತು ಆಚರಣೆ, 3. ನೇಯ್ಗೆ ಮುಂತಾದವು ಮತ್ತು ಮೆದೆಯ ಮಾದರಿಗಳು, 4. ಭಾಷೆ ಅಥವಾ ಜನಪದ ನುಡಿ.
ಅಲೆನ್ ಡುಂಡೆಸ್ ಎಂಬಾತ ಜಾನಪದವನ್ನು ಕುರಿತ ವಿವರಣೆಯನ್ನು ಕೊಡುವುದಕ್ಕೆ ಬದಲಾಗಿ ಒಂದು ಕ್ರಮಬದ್ಧವಾದ ಪಟ್ಟಿಯ ಮೂಲಕ ಜಾನಪದ ಕಲ್ಪನೆಯನ್ನು ಸ್ಥಿರಪಡಿಸಲು ಪ್ರಯತ್ನಿಸಿದ್ದಾನೆ. ಅತ್ಯಂತ ವಿವರವಾದ ಆತನ ಪಟ್ಟಿ ಜಾನಪದದ ವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿದೆ:
1. ಪುರಾಣ, ಐತಿಹ್ಯ, ಜನಪದ ಕಥೆ, ವಿನೋದ, ಗಾದೆ, ಒಗಟು, ಹಾಡು, ಮಂತ್ರ, ಆಶೀರ್ವಚನಗಳು, ಶಾಪಗಳು, ಪ್ರಮಾಣಗಳು, ನಿಂದೆಗಳು, ಮಾರ್ನುಡಿಗಳು, ಕಟಕಿ, ಅಣಕ, ಉಚ್ಚಾರಣೆಗಳು, ನಾಲಗೆದೊಡರುಗಳು, ಸ್ವಾಗತನುಡಿಗಳು, ಬೀಳ್ಕೊಡುಗೆ ಸೂತ್ರಗಳು-ಇತ್ಯಾದಿ.
2. ಜನಪದ ಸಂಪ್ರದಾಯ, ನೃತ್ಯ, ನಾಟಕ, ಕಲೆ, ನಂಬಿಕೆ, ವೈದ್ಯ, ವಾದ್ಯ ಸಂಗೀತ, ಜನಪದಗೀತೆ, ಮಾತು, ಜನಪದ ಉಪಮಾನಗಳು, ಅಲಂಕಾರಗಳು, ಹೆಸರುಗಳು, ಜನಪದ ಕಾವ್ಯ, ಚರಮವಾಕ್ಯಗಳು(ಸಮಾಧಿಗಳ ಮೇಲಿನ ಬರವಣಿಗೆಗಳು), ಸಾರ್ವಜನಿಕ ಶೌಚಗೃಹಗಳ ಮೇಲೆ ಬರೆದ ಬರೆಹಗಳು, ಹಾಸ್ಯಪದಗಳು, ಚೆಂಡನ್ನು ಪುಟ ನೆಗೆಸುವಾಗಿನ ಹಾಡುಗಳು, ಹಗ್ಗದ ಮೇಲೆ ನಡೆಯುವಾಗಿನ ಪ್ರಾಸಗಳು, ಕೈಬೆರಳು ಕಾಲ್ಬೆರಳ ಪ್ರಾಸಗಳು, ಮಕ್ಕಳನ್ನು ಕುಣಿಸುವಾಗಿನ ಪ್ರಾಸಗಳು, ಎಣಿಸುವ ಪ್ರಾಸಗಳು, ಶಿಶುಪ್ರಾಸಗಳು ಇತ್ಯಾದಿ.
3. ಆಟಗಳು, ಸಂಜ್ಞೆಗಳು, ಸಂಕೇತಗಳು, ಪ್ರಾರ್ಥನೆಗಳು, ಪ್ರಾಯೋಗಿಕ ವಿನೋದಗಳು, ಜನಪದ ನಿರುಕ್ತಿ, ಆಹಾರ ಬಗೆಗಳು, ದೌದಿ ಮತ್ತು ಕಸೂತಿ ಚಿತ್ರಗಳು, ಮನೆ, ಮೆದೆ, ಬೇಲಿಗಳ ಬಗೆಗಳು, ಭಿಕ್ಷುಕರ ನುಡಿಗಳು, ಪ್ರಾಣಿಗಳನ್ನು ನಿಯಂತ್ರಿಸಲು ಬಳಸುವ ಸಂಜ್ಞೆಗಳು.
4. ಜ್ಞಾಪಕ ಸೂತ್ರಗಳು-ಲಕೋಟೆಗಳ ಮುದ್ರೆಗಳು, ಆಕಳಿಕೆ ಮುಂತಾದ ಸಂದರ್ಭಗಳಲ್ಲಿ ಆಡುವ ನುಡಿಗಳು.
5. ಹಬ್ಬಗಳು, ವಿಶೇಷ ದಿನಗಳು,
ಈ ಪಟ್ಟಿಯಲ್ಲಿ ಸಾಧ್ಯವಾದ ಮಟ್ಟಿಗೂ ಜಾನಪದ ಸಂಬಂಧವಾದ ವಿಷಯಗಳ ಮೊತ್ತವನ್ನು ಕಾಣಬಹುದು. ಆದರೆ ಕ್ರಮಬದ್ಧವಾದ ವಿಭಜನೆಯ ಪ್ರಯತ್ನ ಇಲ್ಲಿ ನಡೆದಂತಿಲ್ಲ.
ಅಲೆಗ್ಸಾಂಡರ್ ಕ್ರಾಪೆ ಜಾನಪದವನ್ನು ಎಂಟು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದಾನೆ.
1 ಜನಪದ ಸಾಹಿತ್ಯ-ಕಿನ್ನರ ಕಥೆ, ವಿನೋದ ಕಥೆ, ಪ್ರಾಣಿಕಥೆ, ಸ್ಥಳೀಯ ಐತಿಹ್ಯ, ಸಂಚಾರಿ ಐತಿಹ್ಯ, ಗದ್ಯಕಥೆ, ಗಾದೆ, ಗೀತೆ, ಲಾವಣಿ
2 ಸಸ್ಯಸಾಹಿತ್ಯ
3 ಮೂಢನಂಬಿಕೆ
4 ಪ್ರಾಣಿ ಸಾಹಿತ್ಯ
5 ಖನಿಜ ಸಾಹಿತ್ಯ
6 ಸಂಪ್ರದಾಯ ಆಚರಣೆ
7 ಮಾಂತ್ರಿಕ ವಿದ್ಯೆ
8 ನೃತ್ಯನಾಟಕ
ಈ ವಿಭಜನೆಯಲ್ಲಿ ಸಸ್ಯ, ಪ್ರಾಣಿ, ಖನಿಜ ಹಾಗೂ ಭೂಸೃಷ್ಟಿಗೆ ಸಂಬಂಧಿಸಿದ ಜಾನಪದದ ಬಗ್ಗೆ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದೆ.
 	ಸ್ಟಿತ್ ತಾಂಸನ್ 1946ರಲ್ಲಿ ಇಂಡಿಯಾನ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ಸಂಸ್ಥೆಯ ಎರಡನೆಯ ಸಮ್ಮೇಳನದಲ್ಲಿ ಮಂಡಿಸಿದ ವಿಭಜನೆ ಈ ರೀತಿ ಇದೆ.
ಶಾಬ್ದಿಕ ಜಾನಪದ-1 ಅ. ಕತೆಗಳು ಮತ್ತು ಸಂಪ್ರದಾಯಗಳು, ಆ. ಹಾಡುಗಳು-ಕಥನಾತ್ಮಕ ಲಾವಣಿಗಳು, 2. ಭಾವಗೀತೆಗಳು, 3. ಕೆಲಸದ ಹಾಡುಗಳು, 4. ಆಟದ ಹಾಡುಗಳು, 5. ಮಕ್ಕಳ ಹಾಡುಗಳು, ಇ. ಒಗಟು, ಈ. ಗಾದೆ, ಉ. ಹೇಳಿಕೆಗಳು, ಊ. ಮಾಂತ್ರಿಕ ನುಡಿಗಳು.
ಆಚರಣೆಗಳು: ಅ. ನಿರ್ದಿಷ್ಟಕಾಲದ ಆಚರಣೆಗಳು (ಕೆಲವುಹಬ್ಬಗಳು), ಆ. ವ್ಯವಸಾಯ ಸಂಬಂಧ ಆಚರಣೆಗಳು. ಇ. ಮೂಢನಂಬಿಕೆಗಳು.
ಈ ವಿಭಜನೆಯಲ್ಲಿ ಬಹುಮಟ್ಟಿಗೆ ಕಂಠಸ್ಥ ಸಂಪ್ರದಾಯದ ಜಾನಪದ ಪ್ರಕಾರಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆಯಾದರೂ ಇನ್ನೂ ಅನೇಕ ಬಗೆಗಳು ಕೈಬಿಟ್ಟು ಹೋಗಿರುವುದನ್ನು ಗಮನಿಸಬಹುದು. ನೃತ್ಯ, ನಾಟಕ, ವೈದ್ಯ, ಅಡುಗೆ, ಕಲೆ, ಕುಶಲ ಕೈಗಾರಿಕೆ-ಮುಂತಾದ ವಿಷಯಗಳನ್ನು ಇಲ್ಲಿ ಅಳವಡಿಸಿದಂತೆ ತೋರುವುದಿಲ್ಲ. ಅಮೆರಿಕದ ಹಿನ್ನೆಲೆಯಲ್ಲಿ ಜಾನಪದ ಅಧ್ಯಯನವನ್ನು ಇಲ್ಲಿ ಇಷ್ಟೇ ವಿಷಯಗಳಿಗೆ ಸೀಮಿತಗೊಳಿಸಿಕೊಂಡಂತೆ ತೋರುತ್ತದೆ.
ಜಾನಪದ ವಿಭಜನೆಯಲ್ಲಿ ಅತ್ಯಂತ ಶಾಸ್ತ್ರೀಯವಾದ ಕ್ರಮವೊಂದನ್ನು ರೂಪಿಸಿದ ಕೀರ್ತಿ ರಾಲ್ಪ್ ಸ್ಟೀಲ್ ಬಾಗ್ಸ್ ಎಂಬಾತನಿಗೆ ಸೇರುತ್ತದೆ. ಸ್ಪ್ಯಾನಿಷ್ ಜಾನಪದ ವಿದ್ವಾಂಸನಾದ ಈತ ಉತ್ತರ ಕ್ಯಾರಲೈನ ವಿಶ್ವವಿದ್ಯಾನಿಲಯದಲ್ಲಿ ಸ್ಪ್ಯಾನಿಷ್ ಮತ್ತು ಜಾನಪದದ ಪ್ರಾಧ್ಯಾಪಕನಾಗಿದ್ದ; ಪೋಕ್‍ಲೋರ್ ಅಮೆರಿಕಾಸ್ ಸಂಸ್ಥೆಯ ನಿರ್ದೇಶಕನಾಗಿದ್ದ. ಜಾನಪದ ಕ್ಷೇತ್ರದ ಗಣ್ಯ ವಿದ್ವಾಂಸರಲ್ಲೊಬ್ಬನಾದ ಈತನ ಜಾನಪದ ವರ್ಗೀಕರಣಕ್ಕೆ ಸಂಬಂಧಿಸಿದ ಕೊಡುಗೆ ತುಂಬ ಗಣ್ಯವಾದುದು.
ಜಾನಪದ ವರ್ಗೀಕರಣದಲ್ಲಿ ಬಾಗ್ಸ್ ಎರಡು ಕೆಲಸ ಮಾಡಿದ್ದಾನೆ.
1. ಸಮಗ್ರ ಜಾನಪದವನ್ನು ಒಂದು ಸ್ಥೂಲ ವಿಭಜನೆಗೆ ಒಳಪಡಿಸಿ ಪ್ರಮುಖ ಅಂಗಗಳಲ್ಲಿ ಅದರ ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಅನುಕೂಲವಾದ ಜಾನಪದ ಚತುರ್ಮುಖಗಳನ್ನು ರೂಪಿಸಿದುದು.
2. ಪ್ರಕಟಿತ ಅಪ್ರಕಟಿತ ಜಾನಪದಕ್ಕೆಲ್ಲಕ್ಕೂ ಅತ್ಯಂತ ವಿವರವಾದ ಅಭ್ಯಾಸಪೂರ್ಣವಾದ ವರ್ಗೀಕರಣವನ್ನು ಸಿದ್ಧಗೊಳಿಸಿದುದು.
ಜಾನಪದ ಚತುರ್ಮುಖಗಳನ್ನು ಒಂದೊಂದು ವರ್ಗ (ಟೈಪ್) ಎಂದು ಕರೆದ ಬಾಗ್ಸ್ ಅಲ್ಲಲ್ಲಿಯೇ ಅದಕ್ಕೆ ಸೇರಬಹುದಾದ ವಿಷಯಗಳನ್ನು ಸೂಚಿಸಿ ವಸ್ತು ವಿಷಯಗಳ ಸ್ವಭಾವ ಲಕ್ಷಣಕ್ಕನುಗುಣವಾಗಿ ಚತುರ್ಮುಖ ವಿಭಜನೆಯನ್ನು ರೂಪಿಸಿದ್ದಾನೆ.
1 ಸಾಹಿತ್ಯಿಕ ಬಗೆ (ಪುರಾಣ, ಐತಿಹ್ಯ, ಕತೆ ಹಾಗೂ ಕಾವ್ಯಗಳು)
2 ಭಾಷಿಕ ಬಗೆ (ಮಾತು, ಸಂಜ್ಞೆ, ಗಾದೆ, ಒಗಟು ಮುಂತಾದುವು)
3 ವೈಜ್ಞಾನಿಕ ಬಗೆ (ಚಿಕಿತ್ಸೆ, ಭವಿಷ್ಯ, ಮಾಟ, ನಂಬಿಕೆ ಮುಂತಾದುವು).
4 ಕ್ರಿಯಾತ್ಮಕ ಬಗೆ (ಸಂಗೀತ, ನೃತ್ಯ, ಆಟ, ಹಬ್ಬ, ಸಂಪ್ರದಾಯ, ನಾಟಕ ಕಲೆ, ಕುಶಲಕೈಗಾರಿಕೆ, ಅಡುಗೆ ಮುಂತಾದವು)
ಬಾಗ್ಸ್ ಅನೇಕ ವರ್ಷಗಳ ಸಂಶೋಧನೆಯ ಫಲವಾಗಿ ಸಿದ್ಧಗೊಳಿಸಿದ ಎರಡನೆಯ ವರ್ಗೀಕರಣ ಅತ್ಯಂತ ಉಪಯುಕ್ತವಾದುದು. ಅನೇಕ ದೃಷ್ಟಿಗಳಿಂದ ಜಾನಪದ ಅಧ್ಯಯನಕ್ಕೆ ಇದು ಸಹಾಯಕವಾಗುತ್ತದೆ.
1937ರಿಂದಲೇ ವಾರ್ಷಿಕ ಅಭ್ಯಾಸಸೂಚಿಗಳನ್ನು ಪ್ರಕಟಿಸುತ್ತ ಬಂದ ಈತ ಜಾನಪದಕ್ಕೆ ಸೇರಬಹುದಾದ ಅಸಂಖ್ಯಾತ ವಿಷಯಗಳನ್ನು ಪಟ್ಟಿಮಾಡುತ್ತ ಬಂದ. ವಿಭಜನೆ ಒಂದು ಸ್ಥೂಲರೂಪಕ್ಕೆ ಬಂದದ್ದು 1944ರಲ್ಲಿ. ಅನಂತರ ಅದನ್ನು ಪರಿಷ್ಕರಿಸಲಾಯಿತು.
ಪುಸ್ತಕ ಭಂಡಾರಗಳ ಜಾನಪದ ಸಂಗ್ರಹಗಳಲ್ಲಿ ಜಾನಪದಕ್ಕೆ ವಿಶಿಷ್ಟವಾದ ವಿಭಜನಕ್ರಮ ಅಗತ್ಯ ಎಂಬುದನ್ನು ಮನಗಂಡು, ಒಂದೊಂದು ಜಾನಪದ ಶಾಖೆಯೂ ಆ ವ್ಯಾಪಕ ವಿಷಯದ ಹಿನ್ನೆಲೆಯಲ್ಲಿ ಪಡೆದುಕೊಳ್ಳುವ ಸ್ಥಾನ ಯಾವುದು, ಒಳಗೊಳ್ಳುವ ವಿಷಯಗಳೆಷ್ಟು ಎಂಬುದನ್ನು ಕುರಿತು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಸಾಹಸ ಬಾಗ್ಸನದು. ಹಸ್ತಪ್ರತಿಗಳು, ಕಾರ್ಡುಗಳು, ಚಿತ್ರಗಳು, ಧ್ವನಿಮುದ್ರಿಕೆಗಳು, ವಸ್ತುಸಂಗ್ರಹಾಲಯದ ವಸ್ತು ವಿಶೇಷಗಳು, ಜಾನಪದ ವಿಷಯಗಳ ಇತರ ದಾಖಲೆಗಳು-ಇವೆಲ್ಲವನ್ನೂ ಇಲ್ಲಿ ಶಾಸ್ತ್ರೀಯವಾಗಿ ವಿಂಗಡಿಸಲಾಗಿದೆ.
ಬಾಗ್ಸನ ವಿಭಜನೆ ರೂಪುಗೊಳ್ಳುವ ಮೊದಲೇ ಜಾನಪದ ಕ್ಷೇತ್ರದ ಅನೇಕ ಶಾಖೆಗಳಿಗೆ ಸಂಬಂಧಿಸಿದಂತೆ ಕೆಲವು ಪರಿಷ್ಕಾರವಾದ ವಿಭಜನೆಗಳು ಪ್ರಕಟವಾಗಿದ್ದವು. ಕೆಲವು ಪ್ರಕಾರಗಳಿಗೆ ಸಂಬಂಧಿಸಿದ ಅತ್ಯುತ್ತಮ ವಿಭಜನೆಗಳಾವುದನ್ನೂ ತಿರಸ್ಕರಿಸದೆ, ತನ್ನ ವಿಭಜನೆಯಲ್ಲಿ ಅವನ್ನು ಹಾಗೆಯೇ ಸೇರಿಸಿಕೊಂಡದ್ದು ಇಲ್ಲಿ ಗಮನಾರ್ಹ ವಿಷಯ. ಅರ್ನೆ ಆಂಟಿ ಮತ್ತು ಸ್ಟಿತ್ ತಾಂಸನ್ ರೂಪಿಸಿದ ಜನಪದ ಸಾಹಿತ್ಯದ ಆಶಯ ಸೂಚಿಯ ವಿಭಜನಕ್ರಮ ಅರ್ಚರ್ ಟೇಯ್‍ಲರನ ಗಾದೆಗಳ ವಿಭಜನಕ್ರಮವನ್ನು ಇಲ್ಲಿ ಹಾಗೆಯೇ ಸ್ವೀಕರಿಸಲಾಗಿದೆ.
ಬಾಗ್ಸನ ವಿಭಜನೆಯಲ್ಲಿ ಆರು ಪ್ರಮುಖ ಘಟಕಗಳನ್ನು ಕಾಣಬಹುದು: 1. ಗುಂಪು (ಗ್ರೂಪ್) 2. ಪಂಗಡ (ಕ್ಯಾಟಗೊರಿ) 3. ವರ್ಗ (ಟೈಪ್) 4. ಪ್ರಕಾರ (ಫಾರಂ) 5. ವಿಭಾಗ (ಡಿವಿಷನ್) 6. ಉಪವಿಭಾಗ (ಸಬ್‍ಡಿವಿಷನ್).
ಜಾನಪದ ವರ್ಗೀಕರಣಕ್ಕೆ ಒಳಪಡಬಹುದಾದ ಮುಖ್ಯ ವಿಷಯಗಳನ್ನು ಪ್ರಮುಖ ಶೀರ್ಷಿಕೆಗಳಂತೆ ವಿಭಜಿಸಿಕೊಂಡು, ಂ ಯಿಂದ Z ವರೆಗೆ ಸಂಕೇತಗಳನ್ನು ಕೊಡಲಾಗಿದೆ. ಂಃಅ ಎಂಬಂತೆ ಅಕ್ಷರಾನುಕ್ರಮಣಿಕೆಯನ್ನು ಇಲ್ಲಿ ಅನುಸರಿಸದೆ, ವಿಷಯಗಳ ಜೋಡಣೆಯ ಕ್ರಮವನ್ನು ಪಾಲಿಸಲಾಗಿದೆ. ಜಾನಪದ ಸಂಶೋಧನೆ ಬೆಳೆದಂತೆ ಇನ್ನೂ ಅನೇಕ ಶೀರ್ಷಿಕೆಗಳು ಸೇರುವ ಅವಕಾಶವಿರುವುದರಿಂದ ನಡುವೆ ಕೆಲವು ಶೀರ್ಷಿಕೆಗಳಿಗೆ ಸ್ಥಳಾವಕಾಶ ಕಲ್ಪಿಸಿ ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ಇಂಗ್ಲಿಷ್ ವರ್ಣಮಾಲೆಯಿಂದ ಎತ್ತಿಕೊಳ್ಳಲಾಗಿದೆ.
ಬಾಗ್ಸನ ವರ್ಗೀಕರಣದಲ್ಲಿ ಭಾಷೆ ಮತ್ತು ಭೂಗೋಳ, ಸಾಮಾನ್ಯ ಜಾನಪದ-ಇವಿಷ್ಟನ್ನು ಪ್ರತ್ಯೇಕಿಸಿಕೊಂಡರೆ ಉಳಿದುವೆಲ್ಲ ಜಾನಪದದ ವಿವಿಧ ಪ್ರಕಾರಗಳಾಗುತ್ತವೆ. ಉಳಿದ ವಿಭಜನೆಗಳು ಆ ಜಾನಪದ ಪ್ರಕಾರಗಳ ಒಳ ವಿಭಾಗಗಳನ್ನು ಸೂಚಿಸುತ್ತ ಹೋಗುತ್ತವೆ. ಜಾನಪದ ಗದ್ಯಕಥನ ಗುಂಪಾದರೆ, ಪುರಾಣ, ಐತಿಹ್ಯ, ಕಟ್ಟುಕಥೆ ಪಂಗಡವಾಗುತ್ತದೆ. ಆ ಮೂರರಲ್ಲಿ ಕಟ್ಟು ಕಥೆಯನ್ನು ಆರಿಸಿಕೊಂಡು ಮತ್ತೆ ವಿಭಜಿಸಿಕೊಂಡರೆ ವರ್ಗವಾಗುತ್ತದೆ. ಕಟ್ಟು ಕಥೆಯಲ್ಲಿ ವಿವಿಧ ಪ್ರಕಾರಗಳಿರುತ್ತವೆ. ಅತಿಮಾನುಷ ವಿರೋಧಿಗಳ ಪ್ರಕಾರಕ್ಕೆ ಸಂಬಂಧಪಟ್ಟರೆ ಪ್ರಕಾರ ಅದನ್ನು ನಿರ್ದೇಶಿಸುತ್ತದೆ. ಅತಿಮಾನುಷ ಕತೆಯನ್ನು ಮತ್ತೂ ವಿಭಜಿಸಲು ಪ್ರಯತ್ನಿಸಿ ರಾಕ್ಷಸ ಎಂದು ಇಟ್ಟುಕೊಂಡರೆ ವಿಭಾಗವಾಗುತ್ತದೆ. ರಾಕ್ಷಸರಲ್ಲೂ ಬಗೆಗಳಿರುವುದರಿಂದ ಉಪವಿಭಾಗ ಮಾಡಿಕೊಂಡರೆ ರಾಕ್ಷಸಿಯೋ ರಾಕ್ಷಸನೋ ಆಗಬಹುದು. ಹೀಗೆ ಒಂದು ಜಾನಪದ ಪ್ರಕಾರವನ್ನು ಎಷ್ಟು ವಿಭಾಗಗಳಾಗಿಯಾದರೂ ವರ್ಗೀಕರಣ ಮಾಡಿಕೊಳ್ಳುವ ಸಾಧ್ಯತೆ ಇಲ್ಲಿದೆ. ಮೇಲಿನ ಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವರ್ಗೀಕರಣವನ್ನು ಹೀಗೆ ಸೂಚಿಸಬಹುದು :
ಗುಂಪು-ಗದ್ಯಕಥನ
ಪಂಗಡ-ಕಟ್ಟುಕಥೆ
ವರ್ಗ-ಅತಿಮಾನುಷ ಕಥೆ
ಪ್ರಕಾರ-ಅತಿಮಾನುಷ ವಿರೋಧಿಗಳು
ವಿಭಾಗ-ರಾಕ್ಷಸ
ಉಪ ವಿಭಾಗ-ರಾಕ್ಷಸ(ಗಂಡು), ರಾಕ್ಷಸಿ(ಹೆಣ್ಣು) 
ಗುಂಪುಗಳನ್ನು ಅಕ್ಷರಗಳಲ್ಲಿ ನಿರ್ದೇಶಿಸಿದರೆ, ಉಳಿದ ಭಾಗಗಳನ್ನು ಸಂಖ್ಯೆಯಲ್ಲಿ ಸೂಚಿಸುತ್ತ ಹೋಗಲಾಗಿದೆ. ಪಂಗಡಗಳನ್ನು ಶತಕ ಸಂಖ್ಯೆಯಲ್ಲೂ (000-900), ವರ್ಗವನ್ನು ದಶಕ ಸಂಖ್ಯೆಯಲ್ಲೂ(00-90) ಪ್ರಕಾರವನ್ನು ಏಕ ಸಂಖ್ಯೆಯಲ್ಲೂ (0-9) ವಿಭಾಗವನ್ನು ಹತ್ತರ ದಶಮಾಂಶ ಸಂಖ್ಯೆಯಲ್ಲೂ (0-9) ಉಪ ವಿಭಾಗವನ್ನು ನೂರರ ದಶಮಾಂಶ ಸಂಖ್ಯೆಯಲ್ಲೂ (.00-.90) ಸೂಚಿಸಲಾಗುತ್ತದೆ.
ಬಾಗ್ಸನ ವರ್ಗೀಕರಣದ ಕೆಲವು ಭಾಗಗಳನ್ನು ಇಲ್ಲಿ ಕೊಡಲಾಗಿದೆ:
ಗುಂಪುಗಳು(ಂ-Z)	
ಂ	ಸಾಮಾನ್ಯ ಜಾನಪದ
ಃ	ಗದ್ಯಕಥನಗಳು
ಅ	ಲಾವಣಿ ಹಾಡು, ನೃತ್ಯ ಆಟ, ಸಂಗೀತ ಗೀತ
ಆ	ನಾಟಕ
ಈ	ಸಂಪ್ರದಾಯ ಹಬ್ಬ
ಉ	ಭೂಗೋಳ (ಒಳವಿಭಾಗಕ್ಕೆ)
ಐ	ಭಾಷೆ (ಒಳವಿಭಾಗಕ್ಕೆ)
ಒ	ಕಲೆ, ಕುಶಲಕಲೆ, ವಾಸ್ತುಶಿಲ್ಪ
ಓ	ಆಹಾರ, ಪಾನೀಯ
P	ನಂಬಿಕೆ
S	ಮಾತು
ಗಿ	ಗಾದೆ
W	ಒಗಟು
ಗುಂಪು(ಂ-Z) ಮತ್ತು ಪಂಗಡ (000-900)
ಃ ಗದ್ಯಕಥನ
ಃ 200 ಪುರಾಣ 	ಃ 400 ಐತಿಹ್ಯ		ಃ 600 ಕತೆ
ಅ ಲಾವಣಿ ಹಾಡು ನೃತ್ಯ ಆಟ, ಸಂಗೀತ, ಗೀತ
ಅ 200 ಲಾವಣಿ	 ಅ 300 ಹಾಡು	ಅ 400 ನೃತ್ಯ
ಅ 500 ಆಟ	 	ಅ 600 ಸಂಗೀತ	ಅ 700 ಗೀತ
ಆ ನಾಟಕ
ಆ ಧಾರ್ಮಿಕ
ಆ 400 ಲೌಕಿಕ
ಆ 600 ಬೊಂಬೆಯಾಟಗಳು
ಆ 800 ಛಾಯಾ ನಾಟಕಗಳು
ಈ ಸಂಪ್ರದಾಯ, ಹಬ್ಬ
ಈ	500 ಸಂಪ್ರದಾಯು,		ಈ 600 ಹಬ್ಬಗಳು
ಒ ಕಲೆ, ಕುಶಲಕಲೆ ವಾಸ್ತುಶಿಲ್ಪ
ಒ 200 ಕಲೆ, ಕುಶಲಕೈಗೆಲಸ, ಒ 800 ಶಿಲ್ಪ
ಓ ಆಹಾರ, ಪಾನೀಯ	
ಓ 200 ಆಹಾರ,	 ಓ	400 ಪಾನೀಯ	
P ನಂಬಿಕೆ	
P 200 ಪುರಾಣ		P 600 ಮಾತು ಸಂಜ್ಞೆÉ
P 400 ಐತಿಹ್ಯ		P 700 ವೈದ್ಯ
P 500 ಸಂಪ್ರದಾಯ	P 800 ಭವಿಷ್ಯ ವಾಚನ

		ಮಾತು, ಗಾದೆ, ಒಗಟು ಮುಂತಾದ ಪ್ರಕಾರಗಳಿಗೂ ಇದೇ ರೀತಿಯ ಒಳ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ.

	ಆಂತರಿಕ ವಿಭಜನಕ್ರಮವನ್ನು ಅರಿಯಲು ಒಂದು ಜಾನಪದ ಪ್ರಕಾರದ ನಿದರ್ಶನವನ್ನು ಇಲ್ಲಿ ಕೊಡಲಾಗಿದೆ.

	ಃ	ಗದ್ಯಕಥನ
ಃ	200 ಪುರಾಣ	260 ಪ್ರಾಣಿಗಳ ಸೃಷ್ಟಿ ಮತ್ತು ಜೀವನಕ್ರಮ
	220 ಸೃಷ್ಟಿಕರ್ತ	270 ಸಸ್ಯಗಳ ಸೃಷ್ಟಿ ಮತ್ತು ಜೀವನಕ್ರಮ
	230 ದೇವತೆಗಳು	280 ಪ್ರಾಣಿಗಳ ಗುಣಲಕ್ಷಣಗಳು
	240 ಸೃಷ್ಟಿ ಮತ್ತು ವಿಶ್ವದ ಕ್ರಮ	290 ಸಸ್ಯಗಳ ಗುಣಲಕ್ಷಣದ ಮೂಲಗಳು
	250 ಸೃಷ್ಟಿ ಮತ್ತು ಮಾನವನ
	ಜೀವನಕ್ರಮ ಮತ್ತು ಸೃಷ್ಟಿ	 
ಃ	400 ಐತಿಹ್ಯ-
	420 ಅತಿಮಾನುಷ ಜೀವಿ	440 ಪ್ರಾಣಿ
	422 ದೇವತೆ	442 ಸಸ್ತನಿಗಳು
	423 ಕಿನ್ನರಿ ಇತ್ಯಾದಿ	444 ಪಕ್ಷಿ
	425 ಭೂತ, ರಾಕ್ಷಸ	446 ಕೀಟಗಳು
	430 ಮಾನವರು	448 ಮೀನು
	432 ಧಾರ್ಮಿಕ ನಾಯಕ	450 ಖಗೋಳ ವಿಭಾಗ
	433 ಲೌಕಿಕ ನಾಯಕ	452 ಸೂರ್ಯ
	434 ಪುಂಡ, ದಂಗೆಕೋರ ದರೋಡೆ	453 ಚಂದ್ರಕಾರ	
	435 ಮಾಟಗಾರ, ಶ್ಯಾಮನ್	454 ಗ್ರಹ
	436 ದೈತ್ಯ, ದುಷ್ಟಜಂತು	455 ನಕ್ಷತ್ರ
	437 ಅಂಗವಿಕಲರು	457 ಧೂಮಕೇತು
	460 ಗಾಳಿ ಹವಾಗುಣ ಬೆಂಕಿ	462 ಹವಾಸೂಚನೆ, ನಿಯಂತ್ರಣ
	464 ಮಿಂಚು ಗುಡುಗು
	465 ಮೋಡ, ಮಂಜು ಇತ್ಯಾದಿ
	468 ಬೆಂಕಿ
	470 ಭೂಮಿ
	472 ರಚನೆ-ಮೈದಾನ, ಕಾಡು, ಪರ್ವತ, ಕಣಿವೆ, ಗವಿ, ದ್ವೀಪ, ವಿಲಕ್ಷಣ ರಚನೆಗಳು
	474 ಖನಿಜ
	475 ಸಸ್ಯ
	477 ಪ್ರಾಣಿ ಅಥವಾ ಮಾನವನ ಕಾರ್ಯ ಚಟುವಟಿಕೆ, ನಾಶವಾದ ಊರು, ದೆವ್ವದ ಮನೆ, ಅವಶೇಷಗಳು, ಗುಪ್ತನಿಧಿ ಇತ್ಯಾದಿ
	478 ಹೆಸರಿನ ವಿವರಣೆ
	480 ನೀರು
	482 ನಿಂತ ನೀರು-
			. 2 ಸಮುದ್ರ
			. 4 ಸರೋವರ, ಕೊಳ	
			. 6 ಬಾವಿ
	484 ಹರಿಯುವ ನೀರು-
			. 2 ನದಿ ತೊರೆ	
			. 4 ಹಳ್ಳ ಚಿಲುಮೆ	
			. 6 ಕಾಲುವೆ, ಕೃತಕ ಚಿಲುಮೆ
ಃ 600 ಕಥೆ
	620 ಪ್ರಾಣಿಕಥೆ
	640 ಸಾಮಾನ್ಯ ಕಥೆ
	642 ಮಂತ್ರ
	644 ಧಾರ್ಮಿಕ
	646 ರಮ್ಯ, ವಾಸ್ತವಿಕ
	648 ದುಷ್ಟ ಜಂತು
	660 ವಿನೋದ ಕಥೆಗಳು
	662 ದುಷ್ಟ ಗಂಡಸು ಅಥವಾ ಹೆಂಗಸು
	663 ವಿವಾಹಿತ ದಂಪತಿಗಳು
	664 ಸ್ತ್ರೀ
	665 ಪುರುಷ
	666 ಸುದೀರ್ಘ ಕಥೆ
	667 ಸೂತ್ರಕಥೆ, ಅಂತ್ಯವಿಲ್ಲದ ಕಥೆ

	ಈ ಕ್ರಮದಲ್ಲಿ ಪ್ರತಿಯೊಂದು ಜಾನಪದ ಪ್ರಕಾರಕ್ಕೂ ಅದರ ಅಪಾರ ಬಗೆಗಳಿಗೂ ಕ್ರಮಬದ್ಧವಾದ ವರ್ಗೀಕರಣವನ್ನು ಬಾಗ್ಸ್ ರೂಪಿಸಿ ಜಾನಪದದಲ್ಲಿ ಬರಬಹುದಾದ ಎಲ್ಲ ವಸ್ತುವಿಶೇಷಗಳನ್ನು ಹೇಗೆ ಸುಲಭವಾಗಿ ಗುರುತಿಸಬಹುದು ಎಂಬುದನ್ನು ಶ್ರುತಪಡಿಸಿದ್ದಾರೆ. ಜಾನಪದ ವ್ಯಾಪ್ತಿ, ವೈವಿಧ್ಯದ ಅರಿವೂ ಈ ವರ್ಗೀಕರಣದಲ್ಲಿ ಸೇರಿರುವ ವಿಷಯಗಳಿಂದ ವೇದ್ಯವಾಗುತ್ತದೆ. ಇಲ್ಲಿ ಕೇವಲ ಒಂದೆರಡು ಮಾದರಿಗಳನ್ನು ಮಾತ್ರ ಆರಿಸಿ ವರ್ಗೀಕರಣದ ಬಗೆಯನ್ನು ಸೂಚಿಸಲಾಗಿದೆ. ಇವುಗಳ ಜೊತೆಗೆ ಸಂಪ್ರದಾಯ, ಹಬ್ಬ, ಕಲೆ, ಕುಶಲಕಲೆ, ಆಹಾರ ಪಾನೀಯ, ನಂಬಿಕೆ, ಮಾತು ಮುಂತಾದ ಕೆಲವು ಪ್ರಮುಖ ಜಾನಪದ ಪ್ರಕಾರಗಳಿಗೂ ಹೀಗೆಯೇ ವಿವರವಾದ ವರ್ಗೀಕರಣವನ್ನು ನೀಡಲಾಗಿದೆ. ಜಾನಪದ ಅಭ್ಯಾಸಿಗಳಿಗೆ, ಕ್ಷೇತ್ರಕಾರ್ಯಕರ್ತರಿಗೆ ಸಂಶೋಧಕರಿಗೆ ಜಾನಪದದ ವೈಜ್ಞಾನಿಕ ಅಧ್ಯಯನವನ್ನು ರೂಪಿಸಿಕೊಡಲು ಬಾಗ್ಸ್ ವರ್ಗೀಕರಣ ತುಂಬ ಸಹಾಯಕವಾಗಿದೆ ಎಂಬ ಅಂಶವನ್ನು ಮರೆಯುವಂತಿಲ್ಲ.									(ಜೆ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ